ಮಾಘಸ್ನಾನಮಹತ್ತ್ವ
ಮಾಘಸ್ನಾನವೆಂಬುದು ಭಾರತೀಯ ಪಂಚಾಂಗರೀತ್ಯಾ ಮಾಘಮಾಸದಲ್ಲಿ ಪವಿತ್ರ ತೀರ್ಥಕ್ಷೇತ್ರಗಳಲ್ಲಿರುವ ಜಲ-ತೀರ್ಥಗಳಲ್ಲಿ ಮಾಡುವ ಸ್ನಾನ-ವ್ರತ. ಮುಕ್ಕೋಟಿ ದೇವತೆಗಳೂ (ಬ್ರಹ್ಮ, ವಿಷ್ಣು, ಮಹೇಶ, ಆದಿತ್ಯ ಮತ್ತಿತರ ಎಲ್ಲ ದೇವತೆಗಳು) ಮಾಘ ಮಾಸದಲ್ಲಿ ತೀರ್ಥಕ್ಷೇತ್ರಗಳಲ್ಲಿ ಸ್ನಾನ ಮಾಡುತ್ತಾರೆ ಎಂದು ಪುರಾಣಗಳಲ್ಲಿ ಆಗಿದೆ. ಮಾಘಮಾಸದಲ್ಲಿ ಇಡೀ ಭೂಮಂಡಲವು ಪವಿತ್ರವಾಗಿರುವುದೆಂಬ ನಂಬಿಕೆಯಿದೆ.ಚಾಂದ್ರಮಾನ ಪಂಚಾಗದ ಪ್ರಕಾರ, ಚೈತ್ರಮಾಸದಿಂದ ಪಾಲ್ಗುನಮಾಸದವರೆವಿಗಿರುವ ಹನ್ನೆರಡು ತಿಂಗಳುಗಳಲ್ಲಿ ಒಂದೊಂದು ಮಾಸಕ್ಕೂ ತನ್ನದೇ ವೈಶಿಷ್ಟ್ಯವಿದೆ. ಮಾಘಮಾಸದ ವಿಶಿಷ್ಟತೆ ಎಲ್ಲಕ್ಕಿಂತ ಭಿನ್ನವಾದುದು ಕಾರ್ತಿಕಮಾಸದ ದೀಪಾರಾಧನೆಗೆ ಇರುವಷ್ಟೇ ಪ್ರಾಶಸ್ತ್ಯವು ಮಾಘಮಾಸದ ಸ್ನಾನ-ದಾನಗಳಿಗಿವೆ. ನದೀ-ಸರೋವರ-ಸಮುದ್ರಗಳಲ್ಲಿ ಸ್ನಾನಮಾಡಿ ಪಾಪಕ್ಷಯಮಾಡಿಕೊಳ್ಳುವುದು ಮಾಘಸ್ನಾನದ ಗುರಿ.ಧರ್ಮಶಾಸ್ತ್ರಗಳಲ್ಲಿ ಸ್ನಾನಕ್ಕೆ ಮಹತ್ತರವಾದ ಫಲಗಳನ್ನು ಹೇಳಿದೆ. ಇಂತಹ ಉತ್ತಮ ಕಾಲದಲ್ಲಿ ಮಾಘಸ್ನಾನವನ್ನು ಎಲ್ಲರೂ ಅನುಸರಿಸಿ ಪುಣ್ಯ ಸಂಪಾದಿಸುವ ಸುಲಭಮಾರ್ಗವಾಗಿದೆ. ಸೂರ್ಯ ಮಕರರಾಶಿಯಲ್ಲಿರುವಾಗ ಮಾಘಮಾಸದಲ್ಲಿ ಪ್ರಾತಃ ಕಾಲದಲ್ಲಿ ಸ್ನಾನ ಮಾಡುವವರು ಸಮಸ್ತ ಪಾಪಗಳಿಂದ ಮುಕ್ತರಾಗಿ ಅಂತ್ಯದಲ್ಲಿ ಮೋಕ್ಷವನ್ನು ಪಡೆಯುತ್ತಾರೆ ಎಂಬ ನಂಬಿಕೆಯಿದೆ. ಅಲ್ಲದೇ ಈ ಮಾಸದಲ್ಲಿ ತೀರ್ಥರಾಜ ಎಂದೇ ಕರೆಯಲಾಗುವ ಪ್ರಯಾಗ ಮಹಾಕ್ಷೇತ್ರದಲ್ಲಿ ಸ್ನಾನ ಮಾಡಿದವರು ವೈಕುಂಠ ಸೇರುತ್ತಾರೆ. ಮಾಘಪುರಾಣದ ಪ್ರಕಾರ, ಮೊದಲನೇ ದಿನದಲ್ಲಿ ಮಾಘಸ್ನಾನ ಮಾಡಿದವರಿಗೆ ಪಾಪಗಳಿಂದ ಬಿಡುಗಡೆ, ಎರಡನೇ ದಿನವೂ ಮಾಘಸ್ನಾನಾಚರಣೆ ಮುಂದುವರೆಸುವವರು ವಿಷ್ಣು ಲೋಕಸೇರುತ್ತಾರೆ ಹಾಗೂ ಮೂರನೇ ದಿನವೂ ಇದನ್ನು ಮುಂದುವರಿಸಿದವರಿಗೆ ಯಾವ ಫಲವನ್ನು ಕೊಡಬೇಕೆಂದು ವಿಷ್ಣುವೇ ಯೋಚಿಸುತ್ತಾನೆಂದು ಪುರಾಣಗಳಲ್ಲಿ ಉಲ್ಲೇಖಿಸಲಾಗಿದೆ.
ಮಾಘಸ್ನಾನದ ಯೋಗ್ಯ-ಸಮಯ-ಕಾಲ
ಪ್ರತಿಸಂವತ್ಸರಕಾಲದಲ್ಲಿಯೂ, ಪುಷ್ಯ ಶುಕ್ಲ ಪಕ್ಷ ಏಕಾದಶಿಯಂದು ಮಾಘಸ್ನಾವನ್ನು ಸಂಕಲ್ಪಸಹಿತವಾಗಿ ಆರಂಭಿಸಿ, ಮಾಘಶುಕ್ಲ ದ್ವಾದಶೀಯಂದು ಮುಕ್ತಾಯಮಾಡುವ ಸಂಪ್ರದಾಯವಿದೆ. ಪದ್ಮಪುರಾಣ ಮತ್ತು ಬ್ರಹ್ಮಪುರಾಣಗಳಲ್ಲಿ ಮಾಘಸ್ನಾನದ ಇದರ ಉಲ್ಲೇಖವಿದೆ. ಆದಾಗ್ಯು, ಈಗಿನ ರೂಢಿಗನುಸಾರ ಮಾಘಸ್ನಾನವು ಪೌಷ್ಯ ಪೂರ್ಣಿಮೆ (ಪುಷ್ಯಾ-ಹುಣ್ಣಿಮೆಗೆ) ಆರಂಭವಾಗಿ ಅದು ಮಾಘ ಹುಣ್ಣಿಮೆಗೆ ಮುಕ್ತಾಯವಾಗುತ್ತದೆ.
ಮಾಘಸ್ನಾನಕ್ಕೆ ಸೂಕ್ತಕಾಲ
ಮಾಘಮಾಸಪೂರ್ತಿ ಬ್ರಾಹ್ಮೀಮುಹೂರ್ತದಲ್ಲಿ ಅಂದರೆ ನಸುಕಿನಲ್ಲಿ ಸ್ನಾನ ಮಾಡುವುದರಿಂದ ಎಲ್ಲ ಪಾಪಗಳು ದೂರವಾಗುತ್ತವೆ ಹಾಗು ಪ್ರಾಜಾಪತ್ಯ ಎಂಬ ಯಜ್ಞ ಮಾಡಿದಷ್ಟು ಪುಣ್ಯ-ಫಲ ಪ್ರಾಪ್ತವಾಗುತ್ತದೆ ಎಂದು ನಾರದಪುರಾಣದಲ್ಲಿ ತಿಳಿಸಿದೆ. ಸೂರ್ಯೋದಯದ ನಂತರ ಮಾಡಲಾಗುವ ಸ್ನಾನವನ್ನು ಕನಿಷ್ಠ ಪುಣ್ಯಕರವೆಂದು ತಿಳಿಯಲಾಗುತ್ತದೆ. ಸೂರ್ಯೋದಯದ ಮೊದಲಿನ ಸಮಯವನ್ನು ಸ್ನಾನಕ್ಕೆ ಉತ್ತಮವೆಂದು ತಿಳಿಯಲಾಗುತ್ತದೆ.
ಮಾಘಸ್ನಾನದ ಮಹತ್ವ
ಮಾಘಮಾಸದಲ್ಲಿ ಪವಿತ್ರ ಜಲತೀರ್ಥಗಳ ಸ್ನಾನ ಒಂದು ವಿಶೇಷ ಆಧ್ಯಾತ್ಮಿಕ ಶಕ್ತಿಯನ್ನು ಕಲ್ಪಿಸುವುದು ಎಂದು ನಂಬಲಾಗಿದೆ. ಮಾಘಸ್ನಾನವು ಮಾನವಶರೀರದ ರೋಗನಿರೋಧಕ ಶಕ್ತಿ-ಕ್ಷಮತೆಗಳನ್ನು ಹೆಚ್ಚಿಸುತ್ತದೆ. ಪ್ರಯಾಗ ತೀರ್ಥಕ್ಷೇತ್ರದಲ್ಲಿ ಗಂಗಾ ಮತ್ತು ಯಮುನಾ ಹಾಗೂ ಸರಸ್ವತಿ ಈ ಮೂರು ಪವಿತ್ರ ನದಿಗಳ ಸಂಗಮವಿದೆ. ಇದನ್ನು ತ್ರಿವೇಣಿ ಸಂಗಮವೆಂದೂ ಕರೆಯುತ್ತಾರೆ. ಶ್ರೀ ವ್ಯಾಸಮುನಿರಚಿತ ಜಯಾ (ಮಹಾಭಾರತ)ದ ಅನುಶಾಸನ ಪರ್ವದಲ್ಲಿ ‘ಮಾಘ ಮಾಸದಲ್ಲಿ ಯಾರು ಪ್ರಯಾಗ ಸಂಗಮದಲ್ಲಿ ಅಥವಾ ಗೋದಾವರಿ, ಕಾವೇರಿಗಳಂತಹ ಪವಿತ್ರನದಿಗಳಲ್ಲಿ ಭಕ್ತಿಭಾವದಿಂದ ಸ್ನಾನ ಮಾಡುತ್ತಾರೋ, ಅವರು ಪಾಪಗಳಿಂದ ಮುಕ್ತರಾಗುತ್ತಾರೆ ಎಂದು ಹೇಳಲಾಗಿದೆ. ಪ್ರಯಾಗ, ಹರಿದ್ವಾರ, ಉತ್ತರಕಾಶಿ, ನಾಸಿಕ್, ಉಜ್ಜಯಿನಿಯ ನದೀತೀರಗಳಲ್ಲಿ ಮಾಘಸ್ನಾನ ಮಾಡುವುದಕ್ಕೆ ವಿಶೇಷ ಮಹತ್ವವಿದೆ.
ವ್ರತ-ಕೃಚ್ಛ್ರ, ದಾನ ಮತ್ತು ತಪಗಳಿಗಿಂತ ಮಾಘಮಾಸದಲ್ಲಿ ಮಾಡುವ ಸ್ನಾನದಿಂದ ಶ್ರೀಹರಿಯು ಪ್ರಸನ್ನನಾಗುತ್ತಾನೆಂದು ಪದ್ಮಪುರಾಣದಲ್ಲಿ ಹೇಳಲಾಗಿದೆ. ಮಾಘಸ್ನಾನ ಮಾಡುವ ವ್ಯಕ್ತಿಯ ಮೇಲೆ ವಿಷ್ಣುವು ಪ್ರಸನ್ನನಾಗುತ್ತಾನೆ. ವಿಷ್ಣುವು ಸುಖ, ಸೌಭಾಗ್ಯ, ಧನ, ಸಂತಾನ ಮತ್ತು ಮೋಕ್ಷಭಾಗ್ಯಗಳನ್ನು ಪ್ರಸಾದಿಸುತ್ತಾನೆ. ಸಾಂಸಾರಿಕ ಇಚ್ಛೆಗಳನ್ನು ಪೂರ್ತಿಗೊಳಿಸುವ ಸಂಕಲ್ಪದಿಂದ ಮಾಘಸ್ನಾನ ಮಾಡಿದರೆ, ಇಚ್ಛೆಗನುಸಾರ ಫಲ ಪ್ರಾಪ್ತಿಯಾಗುತ್ತದೆ ಮತ್ತು ನಿಷ್ಕಾಮಭಾವದಿಂದ ಮಾಘಸ್ನಾನವನ್ನು ಕೈಗೊಂಡಾಗ ಮೋಕ್ಷದಾಯಿನಿ ಎಂದು ಶಾಸ್ತ್ರಗಳಲ್ಲಿ ಹೇಳಲಾಗಿದೆ.
ಮಾಘಸ್ನಾನಕ್ಕಾಗಿ ಪವಿತ್ರ ಜಲ-ತೀರ್ಥಕ್ಷೇತ್ರಗಳು
ಮಾಘಮಾಸಕಾಲದಲ್ಲಿ ಪ್ರಯಾಗ (ಗಯಾ), ಕಾಶೀ (ವಾರಾಣಸಿ), ನೈಮಿಷಾರಣ್ಯ, ಹರಿದ್ವಾರ ಮತ್ತು ನಾಸಿಕ ಮುಂತಾದ ತೀರ್ಥಕ್ಷೇತ್ರಗಳಲ್ಲಿರುವ ಜಲಗಳಲ್ಲಿ ಮಾಘಸ್ನಾನವನ್ನು ಮಾಡಬಹುದಾಗಿದೆ. ಕನ್ಯಾಕುಮಾರಿ ಮತ್ತು ರಾಮೇಶ್ವರಂ ತೀರ್ಥಕ್ಷೇತ್ರಗಳಲ್ಲಿ ಮಾಡಲಾಗುವ ಮಾಘಸ್ನಾನವೂ ಧರ್ಮಶಾಸ್ತ್ರಕ್ಕನುಸಾರ ಉತ್ತಮವೆಂಬ ನಂಬಿಕೆಯಿದೆ. ಕಾವೇರಿ, ತುಂಗ-ಭದ್ರಾ, ಕೃಷ್ಣಾ ಇತ್ಯಾದಿ ನದಿಗಳಲ್ಲಿಯೂ ಶ್ರದ್ಧಾಭಾವದಿಂದ ಮಾಘಸ್ನಾವನ್ನು ಕೈಗೊಳ್ಳುತ್ತಾರೆ. ರಾಜಸ್ಥಾನದ ಪುಷ್ಕರ ಸರೋವರವೂ ಮಾಘಸ್ನಾನಕ್ಕೆ ಪವಿತ್ರವಾದುದಾಗಿದೆ.
ಮಾಘಸ್ನಾನಕ್ಕಾಗಿ ಯೋಗ್ಯ ದಿನ
ಮಾಘಮಾಸಪೂರ್ತಿ ಮಾಘಸ್ನಾನ ಮಾಡಬೇಕು ಎಂದು ಹೇಳಲಾಗಿದೆ. ಇದು ಕಷ್ಟಸಾಧ್ಯವಾದ ಪರಿಸ್ಥಿತಿಯಲ್ಲಿ, ಮಾಘ ಮಾಸದ ಯಾವುದೇ ಮೂರು ದಿನ ಸ್ನಾನ ಮಾಡಬಹುದು. ಪ್ರಯಾಗದ ತೀರ್ಥಕ್ಷೇತ್ರದಲ್ಲಿ ಮೂರು ಬಾರಿ ಸ್ನಾನ ಮಾಡುವುದರಿಂದ ಸಿಗುವ ಫಲ ಹತ್ತು ಸಾವಿರ ಅಶ್ವಮೇಧ ಯಜ್ಞವನ್ನು ಮಾಡಿದ ಫಲಕ್ಕಿಂತಲೂ ಹೆಚ್ಚಿದೆ. ಮೂರು ದಿನ ಸ್ನಾನ ಮಾಡಲು ಸಾಧ್ಯವಾಗದಿದ್ದರೆ, ಮಾಘ ಮಾಸದ ಯಾವುದೇ ಒಂದು ದಿನ ಮಾಘಸ್ನಾನ ಅವಶ್ಯವಾಗಿ ಮಾಡಬೇಕು. ಕೆಲವು ವಿಶಿಷ್ಟ ತಿಥಿಗಳಲ್ಲಿ ಮಾಡಿದ ಮಾಘಸ್ನಾನವು ವಿಶೇಷಫಲ ನೀಡುತ್ತದೆ. ಆ ತಿಥಿಗಳು ಹೀಗಿವೆ:
ವಿಶಿಷ್ಟ ತಿಥಿಗಳು | ದಿನಗಳು |
---|---|
ಮಕರಸಂಕ್ರಾಂತಿ | 15-01-2023 |
ಪುಷ್ಯ ಅಮಾವಾಸ್ಯೆ/ಮೌನಿ ಅಮಾವಾಸ್ಯೆ | 21-01-2023 |
ಮಾಘ ಶುಕ್ಲ ಪಕ್ಷ ಪಂಚಮೀ/ವಸಂತ ಪಂಚಮಿ | 26-01-2023 |
ಮಾಘ ಪೂರ್ಣಿಮಾ | 05-02-2023 |
ಮಹಾಶಿವರಾತ್ರಿ | 18-02-2023 |
ಮಾಘ ಮಾಸದ ಒಂದು ವೈಶಿಷ್ಟ್ಯವೆಂದರೆ, ಈ ಅವಧಿಯಲ್ಲಿ ಪ್ರತಿಯೊಂದು ಪ್ರಾಕೃತಿಕ ಜಲಮೂಲ ಗಂಗೆಯಂತೆ ಪವಿತ್ರವಾಗುತ್ತದೆ. ಮಾಘಸ್ನಾನಕ್ಕಾಗಿ ಪ್ರಯಾಗ, ವಾರಣಾಸಿ ಮುಂತಾದ ಸ್ಥಾನಗಳು ಪವಿತ್ರವೆಂದು ಪರಿಗಣಿಸಲಾಗಿವೆ; ಆದರೆ ಅಲ್ಲಿ ಸ್ನಾನ ಮಾಡಲು ಸಾಧ್ಯವಾಗದಿದ್ದರೆ, ತಮಗೆ ಸಮೀಪವಿರುವಂತಹ ನದಿ, ಸರೋವರ, ಬಾವಿ ಮುಂತಾದ ಯಾವುದೇ ಪ್ರಾಕೃತಿಕ ಜಲಮೂಲದಲ್ಲಿ ಅವಶ್ಯವಾಗಿ ಸ್ನಾನ ಮಾಡಬೇಕು.
ಮನೆಯಲ್ಲಿ ಮಾಘಸ್ನಾನವನ್ನುಹೇಗೆ ಮಾಡಬೇಕು?
ಒಂದು ವೇಳೆ, ತೀರ್ಥಕ್ಷೇತ್ರಯಾತ್ರೆಗಳನ್ನು ಕೈಗೊಂಡು ಮಾಘಸ್ನಾನ ಸಾಧ್ಯವಾಗದಿದ್ದರೆ, ರಾತ್ರಿ ಮನೆಯ ಮೇಲ್ಛಾವಣಿಯಲ್ಲಿ ಮಣ್ಣಿನ ಕೊಡದಲ್ಲಿ ತುಂಬಿಟ್ಟ, ಇಲ್ಲವೇ ದಿನವಿಡಿ ಸೂರ್ಯನ ಕಿರಣಗಳಿಂದ ಬಿಸಿಯಾದ ನೀರಿನಿಂದ ಸ್ನಾನ ಮಾಡಬೇಕು. ಮನೆಯಲ್ಲಿ ಮಾಘಸ್ನಾನ ಮಾಡುವ ಉದ್ದೇಶದಿಂದ ಬೆಳಗ್ಗೆ ನಸುಕಿನಲ್ಲೆದ್ದು ಗಂಗಾ, ಯಮುನಾ, ಸರಸ್ವತಿ ಮುಂತಾದ ಪವಿತ್ರ ನದಿಗಳ ಸ್ಮರಣೆ ಮಾಡಿ ಸ್ನಾನದ ಜಲದಲ್ಲಿ ಆವಾಹನೆಯನ್ನು ಮಾಡಬೇಕು. ತದನಂತರ ಆ ಜಲದಿಂದ ಸ್ನಾನ ಮಾಡಬೇಕು. ನಂತರ ಭಗವಾನ ಶ್ರೀವಿಷ್ಣುವನ್ನು ಸ್ಮರಿಸಿ ಪಂಚೋಪಚಾರ ಪೂಜೆ ಮಾಡಬೇಕು. ನಾಮಜಪವನ್ನು ಮಾಡಬೇಕು. ಇದರೊಂದಿಗೆ ತಮ್ಮ ಶಕ್ತ್ಯಾನುಸಾರ ಎಳ್ಳು, ಬೆಲ್ಲ, ಉಣ್ಣೆಯ ಬಟ್ಟೆ, ಕಂಬಳಿ, ಪಾದರಕ್ಷೆಯೇ ಮುಂತಾದ ವಸ್ತುಗಳನ್ನು ಯಥಾಶಕ್ತಿ ದಾನ ಮಾಡಬೇಕು. ಮಾಘಸ್ನಾನ ಮಾಡಲು ಅಶಕ್ತರಾದವರು ಪಾದಪ್ರಕ್ಷಾಳನ ಮಾಡಿ, ಮಾಘಸ್ನಾನ ಮಾಡಿದ ವ್ಯಕ್ತಿಗೆ ದಾನ ನೀಡುವುದರಿಂದಲೂ ಸಹ ಮಾಘಮಾಸದಲ್ಲಿ ಮಾಘಸ್ನಾನ ಮಾಡಿದ ಫಲಕ್ಕೆ ಭಾಜನರಾಗುತ್ತಾರೆ ಎನ್ನುತ್ತವೆ ಪುರಾಣಗಳು.
ಮಾಘಸ್ನಾನದ ನಂತರ ಸೂರ್ಯನಿಗೆ ನೀಡುವ ಅರ್ಘ್ಯದ ಮಹತ್ವ
ಶಾಸ್ತ್ರಗಳಲ್ಲಿ ಮಾಘ ಸ್ನಾನದ ಬಳಿಕ ಸೂರ್ಯನಾರಾಯಣನಿಗೆ ಅರ್ಘ್ಯ ನೀಡುವ ಮಹತ್ತ್ವವನ್ನು ತಿಳಿಸಲಾಗಿದೆ. ಅರ್ಘ್ಯ ನೀಡುವುದೆಂದರೆ ನಮ್ಮ ಬೊಗಸೆಯಲ್ಲಿ ಜಲವನ್ನು ತೆಗೆದುಕೊಂಡು ಗಾಯಿತ್ರೀಪುರಸ್ಸರವಾಗಿ ಸೂರ್ಯದೇವರಿಗೆ ಅರ್ಪಿಸುವುದು. ಪದ್ಮಪುರಾಣಕ್ಕನುಸಾರ ಮಾಘಮಾಸದಲ್ಲಿ, ನಸುಕಿನಲ್ಲಿ ಸ್ನಾನ ಮಾಡಿ ಅರ್ಘ್ಯವನ್ನು ನೀಡುವುದಕ್ಕೆ ಅಸಾಧಾರಣ ಮಹತ್ವವಿದೆ. ಎಲ್ಲ ಪಾಪಗಳಿಂದ ಮುಕ್ತಿ ಪಡೆಯಲು ಮತ್ತು ಜಗದೀಶ್ವರನ ಕೃಪೆಯನ್ನು ಸಂಪಾದಿಸಲು ಪ್ರತಿಯೊಬ್ಬರೂ ಮಾಘಸ್ನಾನ ಮಾಡಿ ಸೂರ್ಯಮಂತ್ರವನ್ನು ಉಚ್ಚರಿಸುತ್ತಾ ಸೂರ್ಯನಿಗೆ ಅರ್ಘ್ಯವನ್ನು ಅವಶ್ಯವಾಗಿ ಅರ್ಪಿಸಬೇಕು. ಈ ಸೂರ್ಯಮಂತ್ರ ಹೀಗಿದೆ:
|| ಭಾಸ್ಕರಾಯ ವಿದ್ಮಹೆ |
| ಮಹಾದ್ಯುತಿಕರಾಯ ಧೀಮಹಿ |
| ತನ್ನೊ ಆದಿತ್ಯ ಪ್ರಚೋದಯಾತ್ ||
|| भास्कराय विद्महे |
| महाद्युतिकराय धीमहि |
| तन्नो आदित्य प्रचॊदयात् ||
|| BAskarAya vidmahe |
| mahAdyutikarAya dhImahi |
| tanno Aditya pracOdayAt ||
ಮಾಘ ಮಾಸದಲ್ಲಿ ದಾನದ ಮಹತ್ವ ಮತ್ತು ದಾನಯೋಗ್ಯ ವಸ್ತುಗಳು
ಮಹಾಭಾರತದ ಅನುಶಾಸನ ಪರ್ವದಲ್ಲಿ, ಮಾಘಮಾಸದಲ್ಲಿ ಯಾರು ಬ್ರಾಹ್ಮಣರಿಗೆ ಎಳ್ಳಿನ ದಾನವನ್ನು ನೀಡುತ್ತಾರೋ, ಅವರಿಗೆ ಎಲ್ಲ ಜಂತುಗಳಿಂದ ತುಂಬಿದ ನರಕ ದರ್ಶನವಾಗುವುದಿಲ್ಲ ಎಂದು ಹೇಳಲಾಗಿದೆ. ಮಾಘ ಮಾಸದಲ್ಲಿ ಯಥಾಶಕ್ತಿ ಎಳ್ಳು, ಬೆಲ್ಲ, ಉಣ್ಣೆಯ ಬಟ್ಟೆ, ಕಂಬಳಿ, ಪಾದರಕ್ಷೆಯೇ ಮುಂತಾದ ವಸ್ತುಗಳನ್ನು ದಾನ ಮಾಡಿ ‘ಮಾಧವಃ ಪ್ರಿಯತಾಮ್| ಈ ವಾಕ್ಯವನ್ನು ಹೇಳಬೇಕು.
ಮಾಘಮಾಸದಲ್ಲಿ ಕಲ್ಪವಾಸ
ಕಲ್ಪವೆಂದರೆ ವೇದಾಧ್ಯಯನ, ಮಂತ್ರಪಠಣ ಮತ್ತು ಯಜ್ಞ ಮುಂತಾದ ಕರ್ಮಗಳು. ಮಾಘಮಾಸದಲ್ಲಿ ಪವಿತ್ರ ನದಿಗಳ ಸಂಗಮದ ತೀರದಲ್ಲಿ ಈ ಧಾರ್ಮಿಕ ಕರ್ಮಗಳನ್ನು ಕೈಗೊಳ್ಳುವುದಕ್ಕೆ ‘ಕಲ್ಪವಾಸವೆಂದು ಕರೆಯಲಾಗಿದೆ. ಭಕ್ತಿಭಾವದಿಂದ ಕಲ್ಪವಾಸ ಮಾಡುವವರಿಗೆ ಸದ್ಗತಿ ಪ್ರಾಪ್ತವಾಗುವುದೆಂದು ಶಾಸ್ತ್ರಗಳು ತಿಳಿಸುತ್ತವೆ. ಒಂದು ತಿಂಗಳು ನಡೆಯುವ ಪವಿತ್ರ ಮಾಘಸ್ನಾನ ಮೇಳವು ಉತ್ತರ ಪ್ರದೇಶದ ಪ್ರಯಾಗದಲ್ಲಿ ಪ್ರತಿವರ್ಷ ಆಯೋಜಿಸಲ್ಪಡುತ್ತದೆ. ಈ ಮೇಳಕ್ಕೆ ‘ಕಲ್ಪವಾಸ’ವೆಂದೂ ಕರೆಯುತ್ತಾರೆ. ಕಲ್ಪವಾಸದಲ್ಲಿ ಪ್ರತಿದಿನ ಬೆಳಗ್ಗೆ ಸ್ನಾನ, ಅರ್ಘ್ಯ, ಯಜ್ಞ ಮುಂತಾದವುಗಳನ್ನು ಮಾಡಿದ ನಂತರ ಬ್ರಾಹ್ಮಣ-ಭೋಜನವನ್ನು ಏರ್ಪಡಿಸಬೇಕು. ವಿವಿಧ ಧಾರ್ಮಿಕ ಕಥೆ-ಪ್ರವಚನಗಳನ್ನು ಕೇಳಿ ಸಂಪೂರ್ಣ ದಿನವನ್ನು ಸತ್ಸಂಗದಲ್ಲಿ ಕಳೆಯುತ್ತಾರೆ. ಈ ಸಮಯದಲ್ಲಿ ವ್ಯಕ್ತಿಯು ತನ್ನ ಎಲ್ಲ ಐಹಿಕ ಸುಖಗಳಿಂದ ದೂರವಿರುತ್ತಾನೆ. ಗುಡಿಸಿಲಿನಲ್ಲಿದ್ದು ಭೂಮಿಯ ಮೇಲೆ ಗೋಧಿಯ ಧಾನ್ಯದ ಸಿಪ್ಪೆಯನ್ನು ಹರಡಿ ಅದರ ಮೇಲೆ ಒಂದು ಚಾಪೆಯನ್ನು ಹರಡಿ ಮಲಗುತ್ತಾರೆ.
Leave a review